ಹಾಸನ: ಹಾಸನಾಂಬೆ ವಿಐಪಿಗಳ ಸ್ವತ್ತಲ್ಲ, ಸಾರ್ವಜನಿಕರ ಸ್ವತ್ತು. ಈ ಬಾರಿ ಗಣ್ಯರ ದರ್ಶನವನ್ನು ಕಡಿತಗೊಳಿಸಿದ್ದರಿಂದ ಹೆಚ್ಚು ಭಕ್ತಾದಿಗಳು ಆಗಮಿಸಿ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಹೇಳಿದರು.

ಹಾಸನಾಂಬ ದೇವಾಲಯದ ಸಾರ್ವಜನಿಕ ದರ್ಶನಕ್ಕೆ ಇಂದು ತೆರೆ ಬಿದ್ದಿದ್ದು, ಅದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಈ ಬಾರಿ 25 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ. ಯಾವುದೇ ತೊಂದರೆಯಾಗದಂತೆ ದೇವಿಯ ದರ್ಶನ ಎಲ್ಲರಿಗೂ ಲಭಿಸಿದೆ. ಹಾಸನಾಂಬೆ ಸಾರ್ವಜನಿಕ ದೇವಾಲಯವೇ ಹೊರತು ವಿಐಪಿಗಳ ಸ್ವತ್ತಲ್ಲ ಎಂದು ತಿಳಿಸಿದರು.

ಈ ವರ್ಷ ಹಾಸನಾಂಬ ಜಾತ್ರಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಹಾಸನ ಜಿಲ್ಲೆಯ ಗೌರವ ಹೆಚ್ಚಾಗಿದೆ. ಹಾಸನಾಂಬೆಯ ದರ್ಶನಕ್ಕೆ ಬಂದ ಭಕ್ತರೂ ಸಂತೋಷವಾಗಿದ್ದಾರೆ. ಇದರಿಂದ ಜಿಲ್ಲೆಗೆ ಮತ್ತಷ್ಟು ಗೌರವ ಬಂದಿದೆ. ಅಲ್ಲದೇ ದೇವಾಲಯಕ್ಕೆ ಮುಖ್ಯಮಂತ್ರಿಗಳು ಬಂದಿದ್ದಾಗಲೂ ಸಾರ್ವಜನಿಕರ ದರ್ಶನ ನಿಂತಿಲ್ಲ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದಿಂದಾಗಿ ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಇಲ್ಲಿವರೆಗೂ 24 ಲಕ್ಷ ಜನರು ದರ್ಶನ ಪಡೆದಿದ್ದಾರೆ. ಟಿಕೆಟ್ ಮತ್ತು ಲಾಡು ಮೂಲಕ ಅಂದಾಜು 20 ಕೋಟಿ ರೂ. ಆದಾಯ ಬಂದಿದೆ.

ಅ.9ರಂದು ದೇಗುಲದ ಬಾಗಿಲು ತೆರೆದಿದ್ದು ಅ.23ಕ್ಕೆ ವರ್ಷದ ಬಾಗಿಲು ಮುಚ್ಚಲಾಗುತ್ತದೆ. ಈ ವರ್ಷ ರಾಜ್ಯ ಹಾಗೂ ದೇಶಗಳ ವಿವಿಧ ಭಾಗಗಳಿಂದ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಇದನ್ನೂ ಓದಿ: 12 ರಾಶಿಗಳಿಗೆ 12 ಜ್ಯೋತಿರ್ಲಿಂಗ!: ನಿಮ್ಮ ರಾಶಿಗೆ ಯಾವ ಶಿವಕ್ಷೇತ್ರ ಶುಭ ತರುವುದು ಗೊತ್ತಾ?